ಅಧೀನ ವಿಧಿನಿರ್ಮಾಣ

	ಸಾಮಾನ್ಯವಾಗಿ ಕಾನೂನು ಮಾಡುವ ಅಧಿಕಾರ ಶಾಸನಸಭೆಯದು. ಶಾಸನಸಭೆಯ ಅಂಗೀಕಾರ ಪಡೆದ ಮಸೂದೆ ರಾಜಮುದ್ರೆ ಬಿದ್ದಾಗ ಕಾನೂನಾಗುತ್ತದೆ. ಅಲ್ಲದೆ ಶಾಸನಸಭೆ ತನ್ನ ಈ ಹಕ್ಕನ್ನು ವ್ಯಕ್ತಿಗೊ ನಿಯೋಗಕ್ಕೊ ಸ್ಥಳೀಯ ಸರ್ಕಾರಕ್ಕೊ ವಹಿಸಿದಾಗ ಈ ವ್ಯಕ್ತಿ, ನಿಯೋಗ ಅಥವಾ ಸರ್ಕಾರ ಮಾಡುವ ಕಾನೂನುಗಳಿಗೆ ಈ ಹೆಸರಿದೆ (ಸಬಾರ್ಡಿನೇಟ್ ಲೆಜಿಸ್ಲೇಷನ್).

	ಅಸಂಖ್ಯಾತ ವಿಷಯಗಳನ್ನು ಒಳಗೊಂಡಿರುವ ಅಧೀನ ನಿಯಮಗಳನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಅವುಗಳನ್ನು ಪ್ರಶಾಸನ ಅಥವಾ ನಿಯಮಗಳೆಂದೂ (ರೂಲ್ಸ್) ವಿನಿಯಮನ ಅಥವಾ ಕ್ರಮಪಡಿಸುವ ನಿಬಂಧನೆಗಳೆಂದೂ (ರೆಗ್ಯುಲೇಷನ್ಸ್) ಆದೇಶ, ಆಜ್ಞೆ ಅಥವಾ ಹುಕುಮುಗಳೆಂದೂ (ಆರ್ಡರ್ಸ್) ಯೋಜನೆ ಅಥವಾ ಕಟ್ಟುಪಾಡುಗಳೆಂದೂ (ಸ್ಕೀಂಸ್) ಉಪನಿಯಮಗಳೆಂದೂ (ಬೈಲಾಸ್), ಅಪ್ಪಣೆ ಚೀಟಿ ಅಥವಾ ಪರವಾನೆಗಳೆಂದೂ (ಲೈಸೆನ್ಸನ್) ಮಾರ್ಗತೋರಿಸುವ ಅಪ್ಪಣೆ ಅಥವಾ ಕಾರ್ಯಕ್ರಮದ ವಿಷಯವಾದ ನಿಯಂತ್ರಣಗಳೆಂದೂ (ಡೈರೆಕ್ಷನ್ಸ್) ಸನ್ನದುಗಳೆಂದೂ (ವಾರಂಟ್ಸ್) ವಿಧಿಬದ್ಧವಾಗಿ ಸಮ್ಮತಿಕೊಡುವ ಪತ್ರಗಳೆಂದೂ (ಇನ್‍ಸ್ಟ್ರುಮೆಂಟ್ ಆಫ್ ಅಪ್ರೂವಲ್) e್ಞÁಪಕಪತ್ರ ಅಥವಾ ಒಂದು ಮಾರ್ಗವನ್ನು ಅನುಸರಿಸಬೇಕೆಂದು ಅಧಿಕಾರ ಕೊಡುವ ಅಥವಾ ಶಿಫಾರಸು ಮಾಡುವ ಕಛೇರಿಯ ಸೂಚನಾಪತ್ರಗಳೆಂದೂ (ಮಿನಿಟ್ಸ್) ಕರೆಯಬಹುದು.

	ಸಾಮಾನ್ಯವಾಗಿ ಹೆಚ್ಚು ಸಂಖ್ಯೆಯ ಕಾನೂನುಗಳನ್ನು ಆವಶ್ಯಕವಾಗಿ ದಾಖಲೆ ಮಾಡಿ, ಸಂಖ್ಯೆಯಿಂದ ನಿರ್ದೇಶಿಸಿ ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸುತ್ತಾರೆ. ಉದಾಹರಣೆಗೆ, ಇಂಗ್ಲೆಂಡಿನಲ್ಲಿಯೂ ಭಾರತದಲ್ಲಿಯೂ ಈ ವಾಡಿಕೆ ಇದೆ. ಮಂತ್ರಿಗಳು ಕಾನೂನಿನ ಪ್ರತಿಯೊಂದು ಒಳಪ್ರಕರಣಗಳನ್ನೂ ಕೂಲಂಕಷವಾಗಿ ಸ್ಥಳೀಯ ಆಡಳಿತಗಾರರಿಗೆ ಸುತ್ತೋಲೆಗಳ (ಸಕ್ರ್ಯುಲರ್ಸ್) ಮೂಲಕ ವಿಶದವಾಗಿ ತಿಳಿಸುತ್ತಾರೆ. 

	ಈ ಪ್ರಕಟಣಪತ್ರಗಳು ಆಡಳಿತ ವಿಷಯಕ್ಕೂ ನ್ಯಾಯಾಸ್ಥಾನಗಳ ಕಾನೂನಿಗೆ ಸಂಬಂಧಪಟ್ಟುವು.

	ಕೆಲವುವೇಳೆ ಮೂಲ ಕಾನೂನು ವ್ಯಾಪಕವಾಗಿ ಇರುವುದರಿಂದ ಅದರ ಕೆಳಗೆ ಮಾಡಿದ ಅಧೀನ ವಿಧಿನಿಯಮಗಳೂ ವ್ಯಾಪಕವಾಗಿಯೇ ಇದ್ದಲ್ಲಿ, ಅಂಥವುಗಳನ್ನು ಕಾರ್ಯತಃ ಪ್ರಯೋಗಿಸುವಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಅವುಗಳನ್ನು ನಿವಾರಿಸಲು ಇನ್ನೂ ಇತರ ಅಧೀನ ವಿಧಿನಿಯಮಗಳನ್ನು ಮಾಡಿದಲ್ಲಿ ಆ ನಿಯಮಗಳು ಮೂಲ ಕಾನೂನಿನ ಮೊಮ್ಮಕ್ಕಳಂತೆ ಆಗುತ್ತವೆ. ಶಾಸನವಿಹಿತವಾದ ಸಮಿತಿಗಳು ನಿಯೋಜಿತ ಮಂಡಳಿಗಳು ಮುಂತಾದುವಕ್ಕೆ, ವಿಶೇಷ ಸಂದರ್ಭಗಳಲ್ಲಿ ಈ ರೀತಿಯ ಅಧೀನ ವಿಧಿನಿಯಮಗಳನ್ನು ಮಾಡಲು ಅಧಿಕಾರವಿರುತ್ತದೆ.

	ಗ್ರೇಟ್ ಬ್ರಿಟನ್ನಿನಲ್ಲಿ ಮುಖ್ಯವಾಗಿ ವಿಧಿನಿಯತವಾದ ಅನೇಕ ನಮೂನೆಯ ಅಧೀನ ವಿಧಿನಿಯಮಗಳಿವೆ. ಇದಕ್ಕೆ ನಿರ್ದಿಷ್ಟವಾದ ಹೆಸರುಗಳನ್ನು ಕೊಟ್ಟಿರುತ್ತಾರೆ. ಅವು ಯಾವುವೆಂದರೆ, 1. ವಿಧಿಬದ್ಧವಾದ ಪತ್ರಗಳು (ಸ್ಟ್ಯಾಚುಟರಿ ಇನ್‍ಸ್ಟ್ರುಮೆಂಟ್ಸ್). 2. ಕಟ್ಟುಪಾಡುಗಳು (ಸ್ಕೀಮ್ಸ್). 3. ವಿಶಿಷ್ಟ ಆಜ್ಞೆಗಳು, ಹುಕುಮುಗಳು (ಸ್ಪೆಷಲ್ ಆರ್ಡರ್ಸ್). ಇನ್ನೂ ಇತರ ಬಗೆಯ ನಿಯಮಗಳಾವುವೆಂದರೆ, 1. ತಾತ್ಕಾಲಿಕ ನ್ಯಾಯ ನಿಯಮಗಳು (ಪ್ರೊವಿಷನಲ್ ಆರ್ಡರ್ಸ್), 2. ಕಡ್ಡಾಯವಾಗಿ ಕೊಂಡುಕೊಳ್ಳವುದಕ್ಕೆ ಸಂಬಂಧಪಟ್ಟ ನಿಯಮಗಳು, 3. ವಿಶಿಷ್ಟ ಕಾರ್ಯವಿಧಾನದ ನಿಯಮಗಳು. ಗ್ರೇಟ್ ಬ್ರಿಟನ್ನಿನಲ್ಲಿ ಮಂತ್ರಿಗಳಿಗೆ ಅಧಿಕಾರ ಗೊತ್ತುಮಾಡಿದ ಸಮಿತಿ ನಿಯೋಜಿತ ಅಧಿಕಾರವನ್ನು ಆಯಾ ದರ್ಜೆಯ ಮಟ್ಟಕ್ಕೆ ಒಪ್ಪುವಂತೆ ಕೊಡಬೇಕೆಂದು ವಿಶದಪಡಿಸಿದೆ. ಭಾರತದಲ್ಲಿ, ವ್ಯಕ್ತಿ ಅಥವಾ ಒಂದು ಸಂಸ್ಥೆ ಯಾವುದಾದರೂ ಒಂದು ಕಾರ್ಯವನ್ನು ಮಾಡುವುದಕ್ಕೆ ನ್ಯಾಯ ಸಮ್ಮತ ಅಧಿಕಾರ ಕೊಡುವ ಕಾನೂನು ಎಂದು ವಿಷಯವನ್ನು ಸ್ಪಷ್ಟಪಡಿಸಿದೆ. ಒಂದು ಕಾನೂನಿನ ಕೆಳಗೆ ಮಾಡಿದ ಅಧೀನ ವಿಧಿನಿಯಮಗಳಿಗೆ ಕಾನೂನಿನ ಬಲವಿರುತ್ತದೆಯಾದರೂ ಅವುಗಳನ್ನು ಮುಖ್ಯ ನ್ಯಾಯಾಸ್ಥಾನದಲ್ಲಿ ಪುನರ್ವಿಮರ್ಶೆ ಮಾಡಬಹುದು. ಏಕೆಂದರೆ ನಮ್ಮ ದೇಶದಲ್ಲಿ ಮೂಲ ಕಾನೂನುಗಳ ಪುನರ್ವಿಮರ್ಶೆ ಮಾಡುವ ಹಕ್ಕು ನ್ಯಾಯಾಲಯಕ್ಕಿದೆ.

	ಅಧೀನ ವಿಧಿನಿರ್ಮಾಣದಿಂದ ಶಾಸನಸಭೆಯ ಮೇಲಿಂದ ಕಾಲದ ಒತ್ತಡ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಸಾಮಾನ್ಯ ನಿಯಮಗಳ ಮೇಲೆ ಅದು ತನ್ನ ಗಮನವನ್ನು ಕೇಂದ್ರೀಕರಿಸಲು ಸರ್ಕಾರಕ್ಕೆ ವಿಶಾಲವಾದ ಕಾರ್ಯನೀತಿಯೊಂದನ್ನು ರೂಪಿಸಿಕೊಡಲು ಅನುಕೂಲವಾಗುತ್ತದೆ. ಅಧಿಕಾರಿಗಳಿಗೆ ಸ್ವಂತ ವಿವೇಚನೆಯಿಂದ ನಿಯಮಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ. ಯುದ್ಧ, ಸಾಂಕ್ರಾಮಿಕ ರೋಗ, ಭೂಕಂಪ ಮೊದಲಾದವುಗಳಿಂದ ಉಂಟಾಗುವ ತುರ್ತುಪರಿಸ್ಥಿತಿಯಲ್ಲಿ ಈ ನಿಯಮದಿಂದ ಹೆಚ್ಚಿನ ಅನುಕೂಲವಿದೆ.

	ಅಧೀನ ವಿಧಿನಿರ್ಮಾಣಾಧಿಕಾರವನ್ನು ಬಳಸುವುದರಿಂದ ಮುಖ್ಯವಾಗಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಟ್ಟಬಹುದು. ಕೆಲವುಸಾರಿ ಅವರಿಗೆ ಅನ್ಯಾಯವಾಗಬಹುದು. ಅಧೀನ ವಿಧಿನಿರ್ಮಾಣ ಮಾಡಲು ಇರುವ ಅಧಿಕಾರವನ್ನು ಸಾಕಷ್ಟು ಪರಿಮಿತಿಗೊಳಿಸುವುದು, ಅದರ ಉದ್ದೇಶವೇನು ಎಂಬುದನ್ನು ವಿಶದಪಡಿಸಿ ಅಧೀನ ವಿಧಿನಿರ್ಮಾಣಗಳ ಬಗ್ಗೆ ಶಾಸನಸಭೆ ಸೂಕ್ಷ್ಮಪರಿಶೀಲನೆ ಮಾಡುವುದು, ನ್ಯಾಯಾಸ್ಥಾನದ ಮೂಲಕ ಅವುಗಳನ್ನು ಸರಿಯಾದ ಪುನರ್ವಿಮರ್ಶನೆಗೆ ಒಳಪಡಿಸುವುದು- ಈ ಕೆಲವು ಅಂಶಗಳನ್ನು ಬಳಕೆಗೆ ತಂದಲ್ಲಿ ಅಧೀನ ವಿಧಿನಿರ್ಮಾಣದಿಂದ ಆಗುವ ಅಪಾಯಗಳನ್ನು ತಡೆಗಟ್ಟಬಹುದು.   

(ಕೆ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ